ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ ಜಾಲ
Share
ಮಂದ ಬೆಳಕಿನ ಮಾಟ ಮತ್ತು ಸೌಹಾರ್ದದ ಮೇಲಾಟ

ಲೇಖಕರು : ಶ್ರೀನಿವಾಸ್‌
ಸೋಮವಾರ, ಜನವರಿ 13 , 2014
ಉಡುಪಿ ಶ್ರೀಕೃಷ್ಣ ಮಠ, ಪರ್ಯಾಯ ಸೋದೆ ವಾದಿರಾಜ ಮಠದ ಆಶ್ರಯದೊಂದಿಗೆ ಪರ್ಯಾಯ ಶ್ರೀ ವಿಶ್ವವಲ್ಲಭ ತೀರ್ಥರ ಪರ್ಯಾಯ ಮಂಗಲೋತ್ಸವದ ಪ್ರಯುಕ್ತ ತೆಂಕುತಿಟ್ಟಿನ ಎರಡು ಮಹತ್ವದ ಪ್ರದರ್ಶನಗಳು ಜರಗಿದವು.

ಒಂದು, ದೊಂದಿ- ಮಂದ ಬೆಳಕಿನ ಪ್ರದರ್ಶನ, ಇನ್ನೊಂದು ಅವಳಿ ರಂಗಸ್ಥಳಗಳಲ್ಲಿ ಏಕ ಕಥಾನಕ (ಜೋಡಾಟ). ಮಂದ ಬೆಳಕಿನಲ್ಲಿ ಪುರಾತನ ಕಲಾವೈಭವದೊಂದಿ- ಮಂದ ಬೆಳಕಿನ ಪ್ರದರ್ಶನಕ್ಕೆ ಆಯ್ದುಕೊಂಡ ಎರಡು ಆಖ್ಯಾನಗಳಲ್ಲಿ ಒಂದು ಕುಂಭಕರ್ಣ ದಮನ - ಶ್ರೀರಾಮಚಂದ್ರನ ದುಷ್ಟ ಶಿಕ್ಷಣದ ವ್ಯಕ್ತಿತ್ವವನ್ನು ಮೆರೆಸುವಂಥ ರಾಮಾಯಣದ ಕಥಾನಕ. ಹಿಮ್ಮೇಳದವರೊಂದಿಗೆ ಬಾಲಗೋಪಾಲರು ರಂಗಸ್ಥಳಕ್ಕೆ ಆಗಮಿಸುತ್ತಿ ದ್ದಂತೆ ರಂಗಸ್ಥಳದ ಸುತ್ತ ಇದ್ದ ದೊಂದಿಗಳು ಉರಿಯಲಾರಂಭಿಸಿ ಕತ್ತಲಾವರಿಸಿದ್ದ ರಂಗಸ್ಥಳದೊಳಗೆ ವೇಷಗಳು.

ಬೆಳಗಲಾರಂಭಿಸಿದವು. ಹನುಮಂತನ ಮಠ್ಯತಾಳದ ಒಡ್ಡೋಲಗ ಕುಣಿತದೊಂದಿಗೆ ಆರಂಭ ವಾದ ಉತ್ತರರಂಗವು ಶ್ರೀರಾಮಲಕ್ಷಣರು ಕಪಿಸೈನ್ಯ ಸಮೇತ "ಕಟ್ಟಿ ಸೇತುವ' ಎಂದು ಒಡ್ಡೋಲಗ ನೃತ್ಯಕ್ಕೆ ಕುಣಿಯುವುದರೊಂದಿಗೆ ಪ್ರಸಂಗಕ್ಕೆ ಕಳೆಗಟ್ಟಿತು. ರಾವಣನ ತೆರೆಮರೆಯ ಘನ ಹೆಜ್ಜೆಗಳು, ಕುಂಭಕರ್ಣನನ್ನು ನಿದ್ದೆಯಿಂದ ಎಬ್ಬಿಸುವ ರಂಗಕ್ರಮ, ದಿತ್ತ- ಯುದ್ಧಗಳ ಮುಖಾಮುಖೀ ಅಭಿನಯ, ಸುಗ್ರೀವಾದಿಗಳ ಚೇಷ್ಟೆ, ಶೂರ್ಪನಖೆಯ ವ್ಯಂಗ್ಯನುಡಿ ಮತ್ತು ಕೊನೆಗೆ ಅಗ್ರಜನು ಮಡಿದಾಗ ಪ್ರಲಾಪಿಸುವ ವಿಭೀಷಣನನ್ನು ಸಮಾಧಾನಿಸುವ ಶ್ರೀರಾಮನ ಧೀರೋದಾತ್ತ ವ್ಯಕ್ತಿತ್ವದ ಅನಾವರಣದೊಂದಿಗೆ ಆಖ್ಯಾನ ಮುಕ್ತಾಯಗೊಂಡಿತು.

ಎರಡನೇ ಆಖ್ಯಾನ ಶ್ರೀಕೃಷ್ಣನ ದುಷ್ಟ ಗರ್ವಾಪಹರಣವನ್ನು ಬಿಂಬಿಸುವ "ಭಾಗವತ'ದ ಕಾಳಿಂಗ ಮರ್ದನ. ಗರುಡ, ಕಾಳಿಂಗ, ಮತ್ಸರಾಜ, ಸೌಭರಿ ಮುನಿ- ಮುಂತಾದ ವೇಷಗಳು ಯಕ್ಷಗಾನ ಆಹಾರ್ಯದ ವೈವಿಧ್ಯವನ್ನು ಎತ್ತಿತೋರಿಸುವಂತಿದ್ದವು. ಶ್ರೀಕೃಷ್ಣ, ಬಲರಾಮರು ನಂದಗೋಪನ ಆಸ್ಥಾನಕ್ಕೆ ಸಭಾಕಲಾಸಿನೊಂದಿಗೆ ಪ್ರವೇಶಿಸಿ ಪಾರಂಪರಿಕ ನೃತ್ಯವನ್ನು ಹೊಸ ಬಗೆಯಲ್ಲಿ ಬಳಸುವ ಸಾಧ್ಯತೆಯನ್ನು ಕಾಣಿಸಿದರು. ಕಾಳಿಂಗನ ಹೆಡೆಯನ್ನು ಮೆಟ್ಟಿ ಬಾಲಕೃಷ್ಣ ಕುಣಿಯುವುದರೊಂದಿಗೆ ಮಂದ ಬೆಳಕಿನೊಂದಿಗೆ ಪೂರ್ಣ ಪ್ರಭೆ ಕಾಣಿಸಿಕೊಂಡು ಜಗತ್ತಿಗೆ ಮಂಗಲವಾದುದನ್ನು ಸಂಕೇತಿಸಿತು.

ಪರಸ್ಪರ ಪ್ರತಿಫ‌ಲಿಸಿದ "ದರ್ಪಣ' ರಂಗಸ್ಥಳಗಳು!

ಇಬ್ಬರು ದೇವೇಂದ್ರರ ಪ್ರವೇಶ ದೊಂದಿಗೆ ಸ್ವರ್ಗಕ್ಕೆ ಪ್ರತಿ ಸ್ವರ್ಗಗಳಂತೆ ರೂಪುಗೊಂಡದ್ದು ಜೋಡಾಟದ ರಂಗಸ್ಥಳಗಳು. ಆ ರಂಗಸ್ಥಳದಲ್ಲಿ ಕದನ ಕೋಲಾಹಲವಾದಾಗ ಜನರ ಗಮನ ಅತ್ತ! ಈ ರಂಗಸ್ಥಳದಲ್ಲಿ ಕಥನಕುತೂಹಲ ಏರ್ಪಟ್ಟಾಗ ಸಹೃದಯರ ಗಮನ ಇತ್ತ! ಎರಡು ದೇವಿಮಹಾತೆ¾ (ಮಹಿಷಾಸುರ ಮರ್ದಿನಿ- ಕದಂಬ ವನ ವಾಸಿನಿ) ಪ್ರಸಂಗ ಗಳನ್ನು ಏಕಕಾಲದಲ್ಲಿ ಅವಲೋಕಿಸುವ ಅಪೂರ್ವ ಅವಕಾಶ ಯಕ್ಷಗಾನ ಪ್ರಿಯರಿಗೆ ಲಭ್ಯವಾಗಿತ್ತು. ದೇವೇಂದ್ರ ನಿಂದ ತೊಡಗಿ ರಕ್ತ ಬೀಜಾಸುರನವರೆಗೆ ಎಲ್ಲ ಪಾತ್ರಧಾರಿಗಳು ರಂಗಸ್ಥಳ ಗಳ ವೈಭವ ಕುಂದದಂತೆ ನೋಡಿಕೊಂಡರು.

ಎರಡು ಮೇಳಗಳ ನಡುವೆ ಜೋಡಾಟ ವಾದಾಗ ಇರುವ ಅನುಚಿತ ಮೇಲಾಟ ಗಳಿಲ್ಲದೆ, ಸ್ನೇಹ ಸ್ಪರ್ಧೆಯಾಗಿ ಈ ಪ್ರದರ್ಶನ ಜನರನ್ನು ಮೆಚ್ಚಿಸಿದ್ದು ವಿಶೇಷ. ಶ್ರೀ ಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭ ತೀರ್ಥರ ಪರ್ಯಾಯವೆಂದರೆ ಅಕ್ಷರಶಃ ಕಲೆ- ಸಂಸ್ಕೃತಿಯ ಪರ್ಯಾಯೋತ್ಸವವೇ ಆದದ್ದು ಎಲ್ಲರಿಗೂ ತಿಳಿದ ವಿಚಾರ. ಯಕ್ಷಗಾನವಿಲ್ಲದಿದ್ದರೆ ಸಂಗೀತ, ನಾಟ್ಯ, ನಾಟಕ, ವೇದಗೋಷ್ಠಿ ಏನಾದರೊಂದು ಕಾರ್ಯಕ್ರಮ ಇದ್ದೇ ಇರುತ್ತಿತ್ತು. ಕಳೆದ ಎರಡು ವರ್ಷಗಳಲ್ಲಿ ಬಹುಶಃ ಸರಾಸರಿ ವಾರದಲ್ಲಿ ನಾಲ್ಕು ದಿನವೆಂಬಂತೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಚೆಂಡೆ- ಮದ್ದಲೆಗಳ ಧ್ವನಿ ಮೊಳಗುತ್ತಿತ್ತು. ನೂರಾರು ಮಂದಿ ಹಿರಿ- ಕಿರಿಯ ಯಕ್ಷಗಾನ- ತಾಳಮದ್ದಲೆ ಕಲಾವಿದರು ರಂಗವನ್ನು ಕಳೆಗಟ್ಟಿಸಿ ಪರ್ಯಾಯ ಶ್ರೀಗಳ ಅನುಗ್ರಹಕ್ಕೆ ಪಾತ್ರರಾಗಿದ್ದಾರೆ.

ಪ್ರಸ್ತುತ ಮಂದಬೆಳಕಿನ ಯಕ್ಷಗಾನ ಮತ್ತು ಜೋಡಾಟಗಳು ಗತಕಾಲದ ವೈಭವವನ್ನು ಮರುರೂಪಿ ಸುವ ಶ್ರೀಗಳ ಮಹತ್ವಾಕಾಂಕ್ಷೆಯಂತೆ ಸಂಯೋಜನೆಗೊಂಡಿ ದ್ದವು. ದೊಂದಿ ಬೆಳಕಿನ ಜೊತೆಗೆ ಮಂದ ಬೆಳಕನ್ನು ಬಳಸಿದ್ದು, ಜೋಡಾಟಕ್ಕೆ ಸೌಹಾರ್ದಕೂಟದ ಆಯಾಮ ನೀಡಿದ್ದು ಈ ಪ್ರದರ್ಶನಗಳ ಹೆಚ್ಚುಗಾರಿಕೆಯಾಗಿದೆ. ಈ ಎರಡು ಪ್ರದರ್ಶನಗಳನ್ನು ಆಯೋಜಿಸುವಲ್ಲಿ ಪರ್ಯಾಯ ಮಠದೊಂದಿಗೆ ಯಕ್ಷಗಾನ ಕಲಾರಂಗವೂ ಕೈಜೋಡಿಸಿತ್ತು. ಜೋಡಾಟದಂದು ಪೇಜಾವರ ಮಠಾಧೀಶ ಶ್ರೀವಿಶ್ವೇಶ ತೀರ್ಥರ ದಿವ್ಯೋಪಸ್ಥಿತಿಯೊಂದಿಗೆ ಪರ್ಯಾಯ ಶ್ರೀ ಸೋದೆ ಶ್ರೀಗಳು "ಕಲಾವಿದರ ಕಾಮಧೇನು'ವೆಂದು ಹೆಸರಾದ ತಲೆಂಗಳ ಶ್ಯಾಮ ಭಟ್ಟರನ್ನು ಗೌರವಿಸಿದ್ದು ಹೆಚ್ಚು ಅರ್ಥಪೂರ್ಣವಾಗಿತ್ತು.



ಕೃಪೆ : http://www.udayavani.com


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ